Monday, 28 April 2014

ನನ್ನ ಹೆಸರು ಹೀಗೆ ನಂದಾಯಿತು

ಎರಡ್ನೆದೂ ಹೆಣ್ಣು ಮಗುನೇ ಆಯ್ತಲ್ಲಾ ಎಲ್ಲಾರು ಕೋಪ ಮಾಡ್ಕೊಂಡಿದ್ರಂತೆ ತಾತ ಅಂತೂ ಸಿಕ್ಕಪಟ್ಟೆ ಕೋಪ ಮಾಡ್ಕೊಂಡಿದ್ರಂತೆ, ಸಾಲದಕ್ಕೆ ನಾನು ಮಟ ಮಟ ಮಂಗಳವಾರ ಮಟ ಮಟ ಮಧ್ಯಾಹ್ನ ಮಹಾಲಯ ಅಮವಾಸೆ ಹಿಂದಿನ ದಿನ ಹುಟ್ಟಿದ್ದು... ನಾಮಕರಣ ಮಾಡೋ ಆಸಕ್ತಿ ಯಾರ್ಗೂ ಇರ್ಲಿಲ್ಲ, ಆದ್ರೂ ನಮ್ಮಲ್ಲಿ ಹೆಣ್ ಮಕ್ಕಳು ಹುಟ್ಟಿದ್ರೆ ಮನೆದೇವ್ರ ಹೆಸರು ಇಡೋದು ಪದ್ದತಿ. ಹಾಗೆ ನಮ್ಮ ಮನೆ ದೇವ್ರು ಒಳಕಲ್ಲು (ರುಬ್ಬುವಕಲ್ಲು ) ದೇವಮ್ಮ ಅಂತಾ, ಹಾಗಾಗಿ ದೇವಮ್ಮ ಅಂತ ಹೆಸರಿಟ್ಟ್ರು. ತುಂಬಾ ಚೂಟಿಯೂ ಗಾಟಿಯೂ ಕಿತಾಪತಿಯೂ ಆಗಿದ್ದ ಈ ಮಗುವಿನ ಕಾಟ ತಾಳಲಾರದೆ, ಕಾಲಿಗೆ ದಾರ ಕಟ್ಟಿ, ಕಂಬಕ್ಕೆ ಕಟ್ಟಿಹಾಕುತಿದ್ದರಂತೆ ಅಮ್ಮ. ಏನ್ ಈ ಮಗ ಸುಮ್ನ್ನೆನೇ ಇರಲ್ಲ ಗುಂಡ್ ಉರುಳಾಡೊ ಹಂಗೆ ಉರುಳಾಡ್ತಾ ಇರ್ತದೆ ಅಂತ ನಮ್ಮತ್ತೆ ನನ್ನ ಗುಂಡಿ ಗುಂಡಿ ಅಂತಾ ಕರಿತಾ ಇದ್ರಂತೆ. ಒಮ್ಮೆ ರೋಡ್ ಮಧ್ಯ ಕೂತ್ಕೋಂಡು ಆಟ ಆಡ್ತಾ ಇರ್ಬೆಕಾದ್ರೆ, ಪಕ್ಕದ ಮನೆಯವರ ಕೊಟ್ಟಿಗೆಯಿಂದ ಸುಮಾರು ೩೦ ರಾಸು ಧನ ಕರುಗಳನ್ನು ಆಚೆ ಬಂದ್ವಂತೆ , ಆಗ ಎಲ್ಲಾ ಗಾಬರಿಯಿಂದ ಅಯ್ಯೊ ಪಾಪುಗೇನಾಯ್ತೋ ಎನೋ ಅಂತ ನೋಡೋಕೆ ಬಂದ್ರೆ, ಆದ್ರೆ ಈ ಮಗೂ ಆರಾಮವಾಗಿ ಆಟ ಆಡ್ತಾ ಇತ್ತು , ಪಾಪ ಮೂಕ್ ಪ್ರಾಣಿಗಳಾದ್ರೂ ಅವಕ್ಕೂ ಗೊತ್ತು ನೋಡಿ ಸಣ್ ಮಗು ತುಳಿಬಾರ್ದು ಅಂತ ದಾಟಿಕೊಂಡು ಹೋದವು. ಇನ್ನೊಂದು ಸಲ ಅಮ್ಮ ನನ್ನ ಮರದಡಿ ಬಿಟ್ಟು ಹಿಪ್ಪುನೇರಳೆ ಸೊಪ್ಪು (ರೇಷ್ಮೆ ಹುಳುವಿನ ಆಹಾರ) ಬಿಡಿಸೋಕೆ ಅಂತ ಹೋದಾಗ, ಒಂದು ಹಾವು ಬಂತಂತೆ, ನಾನು ಹುಳ.... ಹುಳ...... ಅಂತ ಹತ್ತಿರ ಹೋಗೋ ಅಷ್ಟೊತ್ತಿಗೆ ಅಪ್ಪ ಬಂದ್ರಂತೆ . ಹೀಗೆ ತುಂಬಾಸಲ ಸಾವಿನ ದವಡೆಯಿಂದ ಪರಾಗಿದ್ದ ಕಾರಣ, ಈ ಹುಡುಗಿ ತುಂಬ ಗಟ್ಟಿ, ತಲೆಮ್ಯಾಲೆ ಗುಂಡ್ ಕಲ್ಲು ಎತ್ತಾಕುದ್ರೂ ಸಾಯಲ್ಲ ಅಂತ ಮತ್ತೆ ಗುಂಡಿ ಅನ್ನೋ ಹೆಸರೆ ಗಟ್ಟಿಯಾಯ್ತು. ನಂಗೊಂದು ಹೆಸರಿದೆ ಅನ್ನೋದನ್ನೆ ಎಲ್ಲ ಮರೆತು ಬಿಟ್ರು ಅನ್ನಿ. ಒಂದಾನೊಂದು ಕಾಲದಲ್ಲಿ ನಾವು ರೆಷ್ಮೆ ಉದ್ಯಮ ಮಾಡ್ತಾ ಇದ್ವು. ಅದು ಕೈ ಕೊಟ್ಟ ಕಾರಣ ಬಾಚಳ್ಳಿ ಬಿಟ್ಟು, ಬೆಂಗಳೂರು ಬೀದಿ ಹಿಡಿದ್ವಿ ಆಗ ನಂಗೆ ೨ ವರ್ಷ. ಮತ್ತೆ ನಾವು ಬಂದು ಸೇರಿದ್ದು ಮಹಾಲಕ್ಷ್ಮಿ ಲೇಔಟ್ ಪಕ್ಕ ಇರೊ ನಂದಿನಿ ಲೇಔಟ್ ಗೆ . ನಮ್ ಪುಣ್ಯಕ್ಕೆ ನಮ್ಮನೆ ಪಕ್ಕ ಒಂದು ಆಂಟಿ ಇದ್ರು ಅವರ ಹೆಸರು ಮಹಾಲಕ್ಶ್ಮಿ . ಅವ್ರ್ಗೆ ನನ್ನ ಕಂಡ್ರೆ ತುಂಬಾ ಇಷ್ಟ ಅವ್ರೂ ನನ್ನ ಗುಂಡಿ ಅಂತಾನೆ ಕರೀತಾ ಇದ್ರು. ಇಲ್ಲೊಮ್ಮೆ ಬೆಳಗ್ಗೆ10. ಗಂಟೆಗೆ ಕಾಣೆಯಾದವಳು ಮತ್ತೆ ಸಂಜೆ 7 ಗಂಟೆಗೆ ಸಿಕ್ಕಿದ್ನಂತೆ ಹೀಗೆ ಹಾಗೆ ಮತ್ತೆ ಗುಂಡು. ನನಗೆ ಮೂರು ವರ್ಷ ಆಯ್ತು ಶಾಲೆಗೆ ಸೇರಿಸ್ಬೇಕು, ಆಗ ಉದ್ಬವ ಆಯ್ತು ಒಂದು ಪ್ರಶ್ನೆ!. ಹೌದು ? ಈ ಗುಂಡಿ ಹೆಸರೇನು ಅಂತ ! ಆಗ ಆ ಆಂಟಿ ನಂದಿನಿ-ಮಹಾಲಕ್ಶ್ಮಿ ಲೇಔಟ್ ಪಕ್ಕ-ಪಕ್ಕ, ನಾನು ನೀನು ಅಕ್ಕ-ಪಕ್ಕ ಅಂತ ಆ ಹೆಸರು ಇಟ್ಟ್ರಂತೆ. ಇದು ನಮ್ಮ ಹೆಸರಿನ ವೃತ್ತಾಂತ.

No comments: