Sunday, 26 January 2014

ರಂಗನಾಯಕಿ

ರಂಗನಾಯಕಿಯ ರಂಗಾದ ಮಾತಿಗೆ ಬೆರಗಾಗಿ
ನಿನ್ನಂತರಾಳದಲಿ ಒಲವ ರಂಗೋಲಿಯಿಟ್ಟವಳ
ಮರೆವುದೇ ಗೆಳೆಯಾ?

ಚಂದದ ಮೈಮಾಟದಲಿ ಮಾದಕ ನೋಟವ ನೆಟ್ಟು
ನಟ್ಟಿರುಳ ಕಗ್ಗತ್ತಲಲಿ ನಿನ್ನ ಕೈಯ ಬಿಟ್ಟವಳಲ್ಲ ನಾ
ನಿನ್ನ ಮನದ ಮರುಭೂಮಿಯಲಿ ಒಲವ ಒಯಸಿಸ್ ಕಟ್ಟಿ
ಒಲುಮೆ ಉದಕವನೆರೆದು ಪ್ರೀತಿಯ ಸಸಿಯ ನೆಟ್ಟವಳು ನಾ

ಬಣ್ಣ ಹಚ್ಚಿ ನೀ ಮೆಚ್ಚುವಂತೆ ನಟಿಸುವವಳಲ್ಲ ನಾ
ಕಣ್ಣ ಮುಚ್ಚಿ ನಿನ್ನ ಹೆಸರ ಅನುಗಾಲ ಪಟಿಸುವವಳು ನಾ
ನಿನ್ನ ರೂಪವ ಹುಚ್ಚಿಯಂತೆ ಮೆಚ್ಚಿಕೊಂಡವಳಲ್ಲಾ ನಾ
ನಿನ್ನ ಸ್ವಚ್ಚ ಮನಸನು ಹೆಚ್ಚಾಗಿ ಹಚ್ಚಿ ಕೊಂಡವಳು ನಾ

ಮುಸ್ಸಂಜೆಯ ಸಲ್ಲಾಪದಿ ನಿನ್ನೊಟ್ಟಿಗೆ ಮರಸುತ್ತಿದವಳಲ್ಲ ನಾ
ಮುಂಜಾನೆಯ ಮುಸುಕಿನಲಿ ನಿನ್ನೇಳಿಗೆಯ ಬಯಸಿ
ಒಬ್ಬಂಟಿಯಾಗಿ ಗುಡಿಯ ಗೋಪುರವ ಸುತ್ತಿದವಳು ನಾ

ತುಟಿಯ ಅಂಚಿನಲಿ ಚಿತ್ತಾರದ ನಗೆಯ ಮೀಟಿ ಮಿಂಚಿ ಹೋದವಳಲ್ಲ ನಾ
ನಿನ್ನೊಲವ ಗಾಯನಕೆ ನನ್ನ ಚಿತ್ತವ ಶೃತಿಮಾಡಿ ಮೀಟಿದವಳು ನಾ
ಬದುಕ ಬಾಳೆಲೆಯಲಿ ತನುಮನವ ಉಣಬಡಿಸಿ
ನಿನ್ನೊಟ್ಟಿಗೆ ಬದುಕ ಹಂಚಿಕೊಂಡವಳು ನಾ

//ನಂದಿನಿ//





No comments: