ಕಾರ್ಮಿಕರ ದಿನಾಚರಣೆ....... ??
ಅಯ್ಯೊ ನಾಳೆ ಕಾರ್ಮಿಕರ ದಿನಾಚರಣೆ, ಕಾರ್ಮಿಕರಿಗೆ ರಜೆ ಕೊಡ್ಬೆಕಲ್ಲಾ ಪ್ರೋಡಕ್ಷನ್ ಬೇರೆ ಆಗಿಲ್ಲ ಏನ್ಮಾಡೋದು? ತಲೆ ಯಾಕೆ ಕೆಡಿಸಿಕೊಳ್ಳೋದು? ಒಂದು ದಿನ ರಜೆ ಕೊಟ್ಟು ಎರಡು ಬಾನುವಾರ ಕೆಲಸ ಮಾಡಿಸಿಕೊಂಡ್ರೆ ಆಯ್ತು ಬಿಡು ಅಂತಾರೆ ಬಹುತೇಕ ಮಾಲಿಕರು!!.ರಜೆ ಒಂದೇ ವಿಷಯವಲ್ಲ. ಎಲ್ಲಾ ವಿಷಯದಲ್ಲೂ ಎಲ್ಲಾ ಕಡೆ ಕಾರ್ಮಿಕರಿಗೆ ಅನ್ಯಾಯ ನಡೆಯುತ್ತಲೇ ಇದೆ. ಅದಕ್ಕೆ ಕಾರಣ ಕಾರ್ಮಿಕರಲ್ಲಿ ಕಾನೂನಿನ ತಿಳುವಳಿಕೆ ಇಲ್ಲದಿರುವುದು ಹಾಗು ಮಾಲಿಕರನ್ನು ಎದುರು ಹಾಕೊಂಡ್ರೆ ಕೆಲಸ ಕಳೆದುಕೊಳ್ಳುವ ಭಯನೂ ಇರಬಹುದು,
ಉದಾಹರಣೆಗೆ ಗಾರ್ಮೆಂಟ್ಸ್ ಪ್ಯಾಕ್ಟರಿಗಳನ್ನೇ ತೆಗೆದುಕೊಳ್ಳಿ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಯಶವಂತ್ ಪುರ ಗೊರಗುಂಟೆ ಪಾಳ್ಯ ಈ ಏರಿಯಾಗಳಿಗೆ ಬಂದ್ರೆ ಸಾಲು ಸಾಲು ಗಾರ್ಮಂಟ್ಸ್ ಪ್ಯಾಕ್ಟರಿಗಳನ್ನ ಕಾಣಬಹುದು. ಅಕ್ಕ ಪಕ್ಕದ ಸ್ಲಂ ನಲ್ಲಿ ವಾಸವಿರುವ ಜನಗಳು ಚಿಕ್ಕವಯಸ್ಸಿನಲ್ಲಿ ವಿದ್ಯೆಗೆ ನೈವೇದ್ಯಮಾಡಿಕೊಂಡ ಬಡಕುಂಟುಂಬದ ಹೆಣ್ಣು ಮಕ್ಕಳು, ಮದುವೆಯಾಗಲು ದುಡ್ಡು ಹೊಂದಿಸಿಕೊಳ್ಳಲ್ಲೋ, ಜೀವನ ನಿರ್ವಹಣೆಗೋ, ಕುಡುಕ ಗಂಡನ ಹೊಟ್ಟೆ ತುಂಬಿಸುವ ಸಲುವಾಗಿಯೋ ... ಈ ಗಾರ್ಮಂಟ್ಸ್ ಗಳನ್ನೇ ಅವಲಂಬಿಸಿರುತ್ತಾರೆ. ಅಲ್ಲಿನ ಕಾರ್ಯ ವೈಖರಿ ಹೇಗಿರುತ್ತದೆ ಅಂದ್ರೆ ಅದು ಒಂದು" ಟೀಮ್ ವರ್ಕ್ ,ಕಾರ್ಮಿಕರನ್ನು ಬ್ಯಾಚ್ ಗಳಾಗಿ ವಿಂಗಡಿಸಲಾಗುತ್ತದೆ, ಒಂದು ಬ್ಯಾಚಿಗೆ ಒಬ್ಬ ಸೂಪರ್ ವೈಸರ್, ಎರಡೂ ಬ್ಯಾಚಿಗೆ ಸೇರಿ ಒಮ್ಮ್ ಪ್ಲೊರ್ ಇನ್ಚಾರ್ಜ್, ಅವರಿಗಿಂತ ಮೇಲ್ಪಟ್ಟವನು ಪಿ. ಎಮ್. ಇದು ಬಿಟ್ಟು ಕಟ್ಟಿಂಗ್ ಸೆಕ್ಷನ್, ವಾಷಿಂಗ್ ಯೂನಿಟ್, ಪ್ಯಾಕಿಂಗ್ ಸೆಕ್ಷನ್ ಹಾಗು ಲೇಬರ್ಸ್ ಕಷ್ಟ ಕೇಳದ ಒಂದು ಕಾರ್ಮಿಕ ಕಛೇರಿ ಇರುತ್ತದೆ. ಕಚ್ಚಾ ಉಡುಪುಗಳ ಒಂದೊಂದು ಭಾಗಗಳನ್ನು ಒಬ್ಬೊಬ್ಬ ಟೈಲರ್ ಹೊಲಿಯುತ್ತಾರೆ. ಒಬ್ಬರಿಂದೊಬ್ಬರಿಗೆ ಪಾಸ್ ಆನ್ ಆಗುತ್ತದೆ. ಟೈಲರ್ ಒಬ್ಬರನ್ನು ಬಿಟ್ಟು ಉಳಿದ ಎಲ್ಲರೂ ಅಂದ್ರೆ, ಹೆಲ್ಪರ್ಸ್,ಚೆಕ್ಕರ್ಸ್, ಐರನರ್ ಎಲ್ಲರೂ ನಿಲುಗಾಲಿನಲ್ಲಿ ನಿಂತೇ ಕೆಲಸ ಮಾಡಬೇಕು. ೯ ರಿಂದ ೬.೦ ವರೆಗೂ ನಿಂತೇ ಕೆಲಸಮಾಡೋದು ಕಷ್ಟ. ಮತ್ತೆ ಗಂಟೆಗೆ ೭೦ ರಿಂದ ೮೦ ಸಿದ್ದ ಉಡುಪುಗಳನ್ನು ತಯಾರಿಲೇ ಅಂತ ಹಿಂಸೆ ಮಾಡ್ತಾರೆ, ಮುಗೀಲಿಲ್ಲಾ ಅಂದ್ರೆ ೭ .೩೦ ಆದ್ರೂ ಮನೆಗೆ ಹೋಗೋ ಹಾಗಿಲ್ಲ. ನ್ಯಾಯವಾಗಿ ನೋಡಿದ್ರೆ ಒವರ್ ಟೈಮ್ ಲೆಕ್ಕದಲ್ಲಿ ಅವರಿಗೆ ಎರಡರಷ್ಟು ಹಣ ಕೊಡ್ಬೇಕು. ಒಟಿ ಇಲ್ಲ ಎಲ್ಲಾ ಬರೀ ಓಸಿ. ಎಲೆಕ್ಷನ್, ಭಾರತ್ ಬಂದ್ ಸಮಯದಲಿ ಕೊಡಲೇ ಬೇಕಾದ ಕಡ್ಡಾಯ ರಜೆಗಳಿಗೂ ಸಂಬಳ ಕಟ್ಟಿಕೊಡುವುದಿಲ್ಲ ಬದಲಾಗಿ ಭಾನುವಾರಗಳಂದು ಕೆಲಸ ಮಾಡಿಸುತ್ತಾರೆ ಕೆಲಸ ಹಂಚಿಕೆಯಲ್ಲೂ ಅನ್ಯಾಯ ನಡೆಯುತ್ತದೆ, ಹಲ್ಲು ಬಾಯಿ ಬಿಡೋರಿಗೆ ಕಡಿಮೆ ಕೆಲಸಕ್ಕೆ ಅಧಿಕ ಸಂಬಳ ಗೊತ್ತುಮಾಡೋದು, ಬಡಪಾಯಿ ಮುಗ್ದರಿಗೆ ಕಡಿಮೆ ಸಂಬಳ ಹೆಚ್ಚು ಕೆಲಸ. ವರ್ಷಕ್ಕೊಮ್ಮೆ ಭೇಟಿ ನೀಡುವ ಅಧಿಕಾರಿಗಳು ಮಾಲಿಕನಿಂದ ದುಡ್ಡು ಪಡೆದು ಬಾಯ್ ಮುಚ್ಚಿಕೊಂಡು ಹೋಗುತ್ತಾರೆ. ಕೇಳುವ ದೈರ್ಯ ಯಾರಲ್ಲೂ ಇರುವುದಿಲ್ಲ . ಗಾರ್ಮಂಟ್ಸ್ ನಲ್ಲಿ ಹೆಂಗಸರಿಗೆ ಮೊದಲ ಆದ್ಯತೆ. ಯಾಕಂದ್ರೆ ಅವರಾದ್ರೆ ಗಲಾಟೆ ಮಾಡುವುದು ಕಡಿಮೆ
ಇನ್ನೂ ದಿನಗೂಲಿ ಕಾರ್ಮಿಕರು. ಯಶವಂತ್ ಪುರ ಯಾರ್ಡ್ ಗೆ ಬಂದ್ರೆ ಸಾಲು ಸಾಲು ಅಕ್ಕಿ ಅಂಗಡಿಗಳಿವೆ, ಇಲ್ಲಿನ ಅಕ್ಕಿ ವ್ಯಾಪಾರ ಹೇಗೆ ಅಂದ್ರೆ ರೈತರು ತಂದ ಲೋಡ್ ಗಟ್ಟಲೆ ಅಕ್ಕಿಯನ್ನು ದಲ್ಲಾಳಿಯೊಬ್ಬ ಲಾರಿ ಸಮೇತ ಕೊಂಡು, ಬೆವರಿಳಿಸದೆ ಕ್ಷಣದಲ್ಲೇ ಮಾರಿ ಲಕ್ಷಗಟ್ಟಲೆ ಹಣ ಮಾಡ್ತಾರೆ. ಲಾರಿ ಅನ್ ಲೋಡ್ ಮಾಡುವ ಕೂಲಿಗಳಿಗೆ ಕೊಡುವುದ್ ಮೂಟೆಗೆ ೨ ರೂಪಾಯಿ . ಅದು ನಿಧಾನವಾಗಿ ಮಾಡುವ ಕೆಲಸವಲ್ಲ, ಒಂದು ಮೂಟೆಯಲ್ಲಿ ೨೫ ಕೆ.ಜಿ ಅಕ್ಕಿ ಇರುತ್ತೆ ಪ್ರತಿ ಸಲವು ಬೆನ್ನ ಮೇಲೆ ತಲಾ ಮೂರು-ನಾಲ್ಕು ಮೂಟೆಗಳನ್ನು ಹೊತ್ತು ಓಡಬೇಕು ಆಗಲ್ಲ ಅಂದ್ರೆ ಹೋಗಯ್ಯ ನೀನಿಲ್ಲ ಅಂದ್ರೆ ಇನ್ನೊಬ್ಬ ಅಂತಾರೆ. ಮತ್ತು ಅಂಗಡಿಯಲ್ಲಿ ಮೂಟೆಗಳನ್ನು ಇಡಲು, ಸ್ಥಳಾವಕಾಶ ಕಡಿಮೆ ಇರುವುದರಿಂದ ಒಂದರ ಮೇಲೊಂದರಂತೆ ಅತೀ ಎತ್ತರಕ್ಕೆ ಜೋಡಿಸಬೇಕಾಗುತ್ತದೆ, ಈಗೀಗ ಪ್ಲಾಸ್ಟಿಕ್ ಚೀಲಗಳೇ ಹೆಚ್ಚಾಗಿರುವುದರಿಂಗ ಜೋಡಿಸುವಾಗ ಯಾಮಾರಿ ಮೂಟೆ ಜಾರಿ ಮೇಲೆ ಬಿದ್ರೆ. ಮುಗೀತು ಕಥೆ, ಇವರಿಗೆ ಯಾವುದೆ ಕಾರ್ಮಿಕರ ನಿಧಿಯಾಗಲಿ , ಇ.ಎಸ್.ಐ. ಕವರೇಜ್ ಆಗಲಿ ಇರೋದಿಲ್ಲ. ಅಂಗಡಿ ಮಾಲಿಕ ಎನಾದ್ರೂ ದೂಡ್ಡ ಮನಸು ಮಾಡಿ ದುಡ್ಡು ಕೊಟ್ರೆ ಪರಿಹಾರ ಇಲ್ಲಾ ಅಂದ್ರೆ ಇಲ್ಲ. ಕೂಲಿ ಕಾರ್ಮಿಕರ ಸಂಘಗಳು ಹೆಸರಿಗಷ್ಟೆ ಬೆಂಬಲ ಸಹಾಯದ ಹೆಸರಿನಲ್ಲಿ ದುಡ್ಡು ನುಂಗಿ ಸುಮ್ಮನಾಗುವರು.
ಇನ್ನೂ ಸರ್ಕಾರಿ ಕಛೇರಿಗಳು. ಬಹುತೇಕ ತುಂಬಾ ದೊಡ್ಡ ಮಟ್ಟ ಸರ್ಕಾರಿ ಸಾಮ್ಯದ ಕಂಪನಿಗಳಲ್ಲಿ, ಕಸ ಗುಡಿಸೋದು, ನೆಲ ವರೆಸೋದು ಕೈದೋಟ ನಿರ್ವಹಣೆ ಹೀಗೆ ಇತರ ಸಹಾಯಕ ಕೆಲಸಗಳಿಗೆ ಟೆಂಡರ್ ಕರೆಯುವ ಮೂಲಕ ಮ್ಯಾನ್ ಪವರ್ ಕನ್ಸಿಸ್ಟೆನ್ಸಿಗಳಿಂದ ಕಾರ್ಮಿಕರ ಸರಬರಾಜು ನಡೆಯುತ್ತದೆ. ಆ ಕನ್ಸಿಸ್ಟೆನ್ಸಿಯವರಿಗೆ ಸರ್ಕಾರಿ ಕಂಪನಿ ಕೆಡೆಯಿಂದ ಒಬ್ಬ ಕೂಲಿಗೆ ಇಂತಿಷ್ಟು ಸಂಬಳ ಅಂತ ಗೊತ್ತುಮಾಡಲಾಗಿರುತ್ತದೆ. ಆದರೆ ಅದರಲ್ಲಿ ಅರ್ಧ ದುಡ್ಡು ಮಾತ್ರ ಸಂಬಳ ರೂಪದಲ್ಲಿ ಸಿಗುತ್ತದೆ. ಉಳಿದ ಹಣ ಕನ್ಸಿಸ್ಟೆನ್ಸಿ ಹಾಗು ಬ್ರಷ್ಟ ಅಧಿಕಾರಿಗಳ ನಡುವೆ ಹಂಚಿಕೆಯಾಗುತ್ತದೆ. ಇದೇ ಕಾರಣಕ್ಕೆ ಪ್ರತೀ ವರ್ಷವೂ ಆ ಟೆಂಡರ್ ಒಂದೇ ಕನ್ಸಿಸ್ಟೆನ್ಸಿಗೆ ಸಿಗುತ್ತದೆ. ಇದು ಸಾಲದು ಅಂತ ಅಲ್ಲೊಬ್ಬ ಸೂಪರ್ ವೈಸರ್ ಇರ್ತಾನೆ. ಕೆಲಸಕ್ಕೆ ತೋಗೊಳೋದು ತೆಗೆದು ಹಾಕೋದು ಅವನ ಕೈಯಲಿ ಇರುತ್ತೆ. ಮತ್ತೆ ಅವನ ಕೈಯಲ್ಲಿ ನಲುಗಾಟ. ಇದು ಕೆಲವು ಉದಾಹರಣೆಗಳಷ್ಟೆ ಎಲ್ಲಾ ರಂಗದಲ್ಲೂ ಈ ವರ್ಗದ ಜನರಿಗೆ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ.
ಯಾವ ಕಾನುನು ಬಂದರೂ ಅಷ್ಟೆ ಬ್ರಷ್ಟಚಾರ ನಿರ್ಮೂಲನೆ ಆಗದ ಹೊರತು, ಈ ಗೋಳು ತಪ್ಪಿದ್ದಲ್ಲ. ಕಾರ್ಮಿಕರ ದಿನಾಚರಣೆ ಬರೀ ನೆಪ , ಆಚಾರ ಮಾತ್ರ
//ನಂದಿನಿ//
No comments:
Post a Comment