ಒಬ್ಬ ಸಾಮಾನ್ಯ ಹಳ್ಳಿಗನಿರ್ತಾನೆ ಅವರಪ್ಪ ಸಾಯುವ ಮುನ್ನ ಮಗನನ್ನು ಕರೆದು ಮಗನೆ, "ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ ಬ್ಯಾಡ ಸೂಳೆ ಸಂಗ ಮಾಡಿದ್ರೂ ಗೀಳೆ ಸಂಗಮಾಡ್ಬೇಡ ತಲೆ ಕಡ್ದ್ ಬಂದ್ರೂ ಹೆಂಡ್ತಿ ಹತ್ರ ನಿಜ ಹೇಳ್ಬೇಡ" ಅಂತ ಹೇಳಿ ಪ್ರಾಣ ಬಿಡ್ತಾನೆ. ಮಗನಿಗೆ ಆಶ್ಚರ್ಯ ಆಯ್ತು, ಅಲ್ಲಲ್ಲೆ!! ಇದೇನಿದು? ಅಪ್ಪ ಹಿಂಗ್ ಹೇಳ್ಬುಟ್ಟು ಸತ್ತ್ನಲ್ಲ? ಇದ್ನ ಪರೀಕ್ಷೆ ಮಾಡ್ಲೇಬೇಕು ಅಂತ ಹೊರ್ಟ, ಒಂದ್ಸಾರಿ ಅವನ ಹೊಲದಲ್ಲಿ ಆಳುಗಳು ಕಳೆ ಕೀಳ್ತಾ ಇರ್ಬೇಕಾದ್ರೆ "ಏನ್ ಬುದ್ದಿ ನೀವು ಇಷ್ಟು ದಿನ ಕೆಲ್ಸ ಮಾಡಿದ್ರೂ ಒಂದಿನಾನು ಒಂದ್ ಎಲೆ ಅಡಿಕೆ ತಂದು ಕೊಡ್ನಿಲ್ಲ ಅಂತ ರೇಗ್ಸಕ್ ಹಿಡಿದ್ರು, ಇವ್ನು ಎಲೆ ಅಡಿಕೆ ತಾನೆ ತಂದ್ ಕೊಡ್ತೀನಿ ತಕಳಿ ಅದಕ್ಕೇನಂತೆ ಅಂತ ಊರೊಳಗ್ ಬಂದ. ಅಯ್ಯೊ ಈಗೇನ್ ಮಾಡೋದು ದುಡ್ಡೆ ಇಲ್ವಲ್ಲ ಮಾತಿಗ್ ಬೇರೆ ಒಪ್ಪ್ಕೊಂಡ್ ಬಿಟ್ನಲ್ಲಾ?...... ಅಂತ ಯೊಚ್ನೆ ಮಾಡ್ತಾ ಇರ್ತಾನೆ. ಆಗ ಒಂದು ಉಪಾಯ ಹೊಳೆಯುತ್ತೆ, ಹ್ಮ್ಮ್ಮ್ ಆ ಪೆಟ್ಟಿ ಅಂಗಡಿ ಸುಬ್ಬಣ್ಣನ ತವ ಸಾಲ ತಕ್ಕೊಂಡು ಹೋಗಿ ಎಲ್ರೂಗು ಎಲೆ ತಕ್ಕೊಂಡು ಹೋಗಿ ಕೊಡುವ ಅಂತ ಸಾಲ ಕೇಳ್ದಾ. ಅವ ಅದ್ಕೇನಂತೆ ತಕಳಿ ಅಂತ ಕೊಟ್ಟ. ಎಲೆ ಅಡ್ಕೆ ತಕ್ಕೊಂಡು ಹೋಗಿ ಆಳು ಕಾಳಿಗೆಲ್ಲ ಕೊಟ್ಟ, ಆಮೇಲೆ ಆ ಗಿಟ್ಟಿ (ಅಂದ್ರೆ ಸಾಮನ್ಯ ವ್ಯಾಪಾರಿ ಅಂತೆ) ದಿನ ಹೋಗೋ ಬರೋ ದಾರಿಲೆಲ್ಲ ಅಡ್ಡ ಹಾಕಿ ಎಲ್ಲೊ ನನ್ನ್ ದುಡ್ಡು ಎಲ್ಲೋ ನನ್ನ್ ದುಡ್ಡು ಅಂತ ಜನಗಳ್ ಮುಂದೆ ಕೇಳಿ ಕೇಳಿ ಮರ್ಯಾದೆ ಕಳೀತಾ ಇದ್ದ . ಆಗ ಅವನಿಗೆ ಅನ್ನಿಸ್ತು ಹೌದು ಅಪ್ಪ ಹೇಳಿದ್ದು ಸರಿ ಅಂತ . ಮತ್ತೆ ಎರಡನೇದು ಗೀಳೆ, ಅಂದ್ರೆ ಅತ್ತೆ ಮನೆ ಸೊಸೆ ಅಂತೆ , ಒಂದಿನ ಆ ಅತ್ತೆ ಮನೆ ಸೊಸೆ ಇವ್ನ್ ಕಡೆ ನೋಡ್ಕೊಂಡು ಹಲ್ಲ್ ಗಿಂಚ್ಕೊಂಡು ನೀರ್ ಸೇದ್ತಾ ಇದ್ಲಂತೆ , ಇವ್ನು ಸುಮ್ನೆ ಮಾತಿಗೆ ಏಯ್ ಬರ್ರ್ತೀಯಾ ಅಂದ. ಆಕೆ ಹೂಂ ಬರ್ತೀನಿ ೨೫ ರೂಪಾಯಿ ಕೋಡ್ತಿಯ? ಅಂದ್ಲು . ಅಷ್ಟೆ ತಾನೆ ಸರಿ ಬಾ ಅಂತ ಕೊಣೆಯೊಳಗೆ ಹೋದವ್ನೆ ಚಾಕು ತೋರಿಸ್ದ. ಈಕೆ ಅಯ್ಯೊಯ್ಯೊ ಬನ್ರಪ್ಪ್ಪ ಯಾರಾನು ಕಾಪಾಡಿ ಇವನು ನನ್ನ ಹಿಡ್ಕೊಳ್ಳೋಕೆ ಬಂದವ್ನೆ ಅಂತ ಬಾಯ್ ಬಡ್ಕೊಂಡ್ಲು, ಊರ್ ಜನ ಎಲ್ಲಾ ಬಂದು ಇವನನ್ನ್ ಕಂಬಕ್ಕೆ ಕಟ್ಟ್ ಹಾಕಿ ಚೆನ್ನಾಗ್ ಹೊಡ್ದು ಹಣ್ಗಾಯಿ ನೀರ್ಗಾಯಿ ಮಾಡ್ಬುಟ್ರು. ಅವ್ನು ಅವಮಾನ ತಡೆಯೋಕಾಗ್ದೆ , ಯಪ್ಪಾ ಸಾಕಪ್ಪ್ಪ ಈ ಗೀಳೆ ಸಂಗ ಅಂತ ಊರ್ ಬಿಟ್ಟು ಪಟ್ಟಣಕ್ಕೆ ಬಂದ. ಅಲ್ಲಿ ಒಬ್ಬ ಶೆಟ್ಟಿ ಪರಿಚಯವಾಯ್ತು, ಹಾಗೆ ವಿಶ್ವಾಸನೂ ಬೆಳೆಯಿತು ಅದೆ ವಿಶ್ವಾಸದ ಮೇಲೆ ಶೆಟ್ಟಿ ಇವನಿಗೆ ಸ್ವಂತ ಅಂಗಡಿ ಮಾಡೋಕೆ ಸಾಲ ಕೊಟ್ಟ. ಒಳ್ಳೆ ಲಾಭ ಬಂತು ಚೆನ್ನಾಗ್ ಸಂಪಾದನೆ ಮಾಡ್ದ. ಹಾಗೆ ಒಂದಿನ ದಾರಿಲಿ ಬರುವಾಗ ಒಬ್ಬ ವ್ಯೆಶ್ಯೆಯ ಮನೆ ಕಂಡ. ಮನೆ ಮುಂದೆ"೨೫೦೦" ಅಂತ ಬೋರ್ಡ್ ಹಾಕಿತ್ತು. ಇವ್ನು ಸರಿ ಅಂತ ಮನೆಯೊಳಗೆ ಹೋದ, ದುಡ್ಡು ಕೊಟ್ಟವನೆ ಆ ಗೀಳೆಗೆ ತೊರಿಸಿದಂಗೆ ಚಾಕು ತೋರಿಸಿ ನಿನ್ನ ಕೊಂದುಬಿಡ್ತೀನಿ ಅಂದ. ಈಕೆ "ನೋಡಪ್ಪ, ನಾನು ಸೂಳೆ ಈ ಕ್ಷಣಕ್ಕೆ ದುಡ್ಡಿಗಾಗಿ ನನ್ನನ್ನು ನಾನು ಮಾರ್ಕೊಂಡು ಬಿಟ್ಟಿದ್ದೀನಿ, ಈ ದೇಹ ನಿನ್ನದು ನಂಗೆ ಇಂಥ ಹೀನ ಬದುಕನ್ನ ಕೊಟ್ಟ ಆ ದೇವರು ನನ್ನ ಸಾವನ್ನೂ ನಿನ್ನ ಕಯ್ಯಲ್ಲಿ ಬರೆದಿದ್ದ್ರೆ ಹಾಗೆ ಆಗಲಿ ನಿನ್ನ ಇಚ್ಚೆ ಎಂದು ಮಯ್ಯೊಡ್ಡಿದಳು. ಆತನಿಗೆ ತನ್ನ ತಪ್ಪಿನ್ನ ಅರಿವಾಗಿ ದುಡ್ಡನ್ನು ಅಲ್ಲೆ ಬಿಟ್ಟು ಅಲ್ಲಿಂದ ಹೊರಟ. ತುಂಬಾ ಪಶ್ಚಾತಾಪವೆನಿಸಿ ಸಂಪಾದಿಸಿದನ್ನೆಲ್ಲ ಒಗ್ಗೂಡಿಸಿಕೊಂಡು ಆ ಊರು ಬಿಟ್ಟು ತನ್ನೂರಿಗೆ ಹೊರಟ . ಮನೆಗೆ ಬಂದು ಅಪ್ಪನ ಪಟ ನೋಡಿದವನಿಗೆ ಅಪ್ಪನ ಮಾತುಗಳು ಎಷ್ಟು ಸತ್ಯ ಅನ್ನಿಸಿತು. ಹ್ಮ್ ... ಎಲ್ಲಾ ಸರಿ ಇನ್ನೂ ಹಂಡ್ತಿ ಪರೀಕ್ಷೆಯೊಂದು ಬಾಕಿ ಐತೆ. ಅದನ್ನು ಪರೀಕ್ಕ್ಷೆ ಮಾಡೇ ಬಿಡುವ ಎಂದು ತೀರ್ಮಾನಿಸಿ ಒಮ್ಮೆ ಒಂದು ಆಡಿನ (ಮೇಕೆ) ಮರಿಯನ್ನು ತಂದು ಕತ್ತರಿಸಿ ಅದನ್ನು ಬಾವಿಗೆ ಹಾಕಿ ಮನೆಗೆ ಬರುತ್ತಾನೆ. ಅವನ ಬಟ್ಟೆ ಮೇಲಿನ ರಕ್ತದ ಕಲೆನೋಡಿ " ಎನ್ರೀ ಇದು ರಕ್ತಾ? ಅಂತ ಹೆಂಡ್ತಿ ಕೇಳ್ತಾಳೆ, ಅದಕ್ಕೆ ಇವ್ನು ಯಾರ್ಗೂ ಹೇಳ್ಬೇಡ ಕನಮ್ಮಿ ಈ ಗಂಟಿಗಾಗಿ ಊರಿನ ರಾಜನ್ ಮಗನ ತಲೆ ಕಡಿದು ಬಾವಿಗೆ ಹಾಕ್ಬಿಟ್ಟೆ ಅಂತ ತಾನು ಪಟ್ಟಣದಿಂದ ಸಂಪಾದಿಸಿ ತಂದ ಹಣ ತೋರಿಸ್ತಾನೆ (ಅದೇ ಸಮಯಕ್ಕೆ ಊರಿನ ರಾಜನ ಮಗ ಯಾರಿಗೂ ಹೇಳದೆ ದೇಶಾಂತರ ಹೋಗಿರುತ್ತಾನೆ,) ಒಂದಿನ ಯಾವುದೋ ಮಾತಿಗೆ ಗಂಡ ಹೆಂಡ್ತಿ ಇಬ್ರೂಗು ಜಗಳ ಆಗಿ, ಇವ್ನು ಹೆಂಡ್ತಿನ ಹಿಡ್ಕೊಂಡು ನಾಲ್ಕೇಟು ಬಿಡ್ತಾನೆ ಆಗ ಆಕೆ ಅಯ್ಯೊ ನಿನ್ ಕೈ ಸೇದ್ ಹೋಗಾ , ಅಂತವ್ನೆ, ಇಂತವ್ನೆ, ಬೊಂತೆವ್ನೆ ಅಂಗಾಗೋವೊತ್ಗೆ ಅಲ್ವ ಊರ ರಾಜ್ನ ಮಗನ ತಲೆ ಕಡ್ದು ಬಾವಿಗೆ ಹಾಕ್ದೋನು ನೀನು ಅಂತ ಊರ್ಗೆಲ್ಲಾ ಕೇಳ್ಸೋಸೊ ಹಾಗೆ ಬಯ್ಯೊಕೆ ಶುರುಮಾಡ್ತಾಳೆ. ಅದನ್ನ ಹಾಲು ಮಾರುವವಳು ಕೇಳಿಸಿಕೊಂಡು ರಾಜರ ಕಿವಿಗೆ ಊದುತ್ತಾಳೆ. ರಾಜನ ಅಪ್ಪಣೆಯಂತೆ ಮರುದಿನವೆ ಸೈನಿಕರು ಬಂದು ಇವನನ್ನು ರಾಜರ ಆಸ್ಥಾನಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವನ ಮಾತಿಗೆ ಅವಕಾಶ ಕೊಡದೆ ಅವನಿಗೆ ರಾಜ ಗಲ್ಲು ಶಿಕ್ಷೆ ಘೋಷಣೆ ಮಾಡ್ತನೆ. ಇವ್ನ ಅಯ್ಯೊ ಬಡ್ದಿ ಮಗ್ನೆ ಅಪ್ಪ ನೀನ್ ಹೇಳಿದ್ ಮಾತು ಪರೀಕ್ಷೆ ಮಾಡೋಕೋಗಿ ಹಿಂಗಾಯ್ತಲ್ಲೊ ಯಪ್ಪಾ ಅಂತ ಗೋಳಾಡೋಕೆ ಶುರುಮಾಡ್ತಾನೆ. ಅವನ ಅದೃಷ್ಟ, ಸದ್ಯ ದೇಶಾಂತರ ಹೋದ ರಾಜಕುಮಾರ ಮರಳಿ ಬರ್ತಾನೆ. ಆಗ ರಾಜ ಅಲ್ಲಯ್ಯ ನೀನು ನನ್ನ ಮಗನನ್ನು ಕೊಂದಿಲ್ಲ ಮತ್ತೆ ಯಾಕೆ ನಿನ್ನ ಹೆಂಡತಿಯ ಬಳಿ ಹಾಗೆ ಹೇಳಿದೆ ಎಂದು ಕೇಳಿದಾಗ, ಈತ ಎಲ್ಲಾ ನಿಜ ಸಂಗತಿಯನ್ನು ಅಪ್ಪನ ಮಾತನ್ನು ರಾಜನಿಗೆ ತಿಳಿಸುತ್ತಾನೆ. ಆಗ ರಾಜ ಇವನನ್ನು ಬಿಡುಗಡೆ ಮಾಡಿ ಕಳಿಸ್ತಾನೆ. ಅಂದಿನಿಂದ ಆತ ಅಪ್ಪನ ಮಾತನ್ನು ಯಥಾ ಪಾಲಿಸಲು ಶುರುಮಾಡ್ತಾನೆ .
//ನಂದಿನಿ
//ನಂದಿನಿ
No comments:
Post a Comment