Tuesday, 22 July 2014

ಇದಕ್ಕೇಲ್ಲಾ ಯಾರು ಹೊಣೆ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಸಂಕೋಚ ಬಿಟ್ಟು ಓದಿ.

ಇದಕ್ಕೇಲ್ಲಾ ಯಾರು ಹೊಣೆ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಸಂಕೋಚ ಬಿಟ್ಟು ಓದಿ.

ನಾವು ಕೆಲವು ವಿಚಾರಗಳ ಬಗ್ಗೆ  ನಕಾರತ್ಮಕವಾಗಿ ಯೋಚಿಸಿದಾಗ ಮಾತ್ರ ಅವುಗಳಲ್ಲಿರುವ ಲೋಪಗಳನ್ನು ಗುರುತಿಸಲು ಸಾಧ್ಯ. ಹೆಂಗಸರ ಬುದ್ದಿ ಮೊಣಕಾಲವರೆಗೆ ಅನ್ನೋ ಗಾದೆ ಮಾತು ನಿಜವಾದ್ರೂ ಪರ್ವಾಗಿಲ್ಲ. ಕುತ್ತಿಗೆವರೆಗೂ ಯಾರನ್ನು ನಂಬಲು ಹೋಗಬೇಡಿ. ಅದು ಗೆಳೆಯರಾಗಲಿ ಗೆಳತಿಯರಾಗಲಿ ದಾರಿ ತಪ್ಪಿಸುವ ಸ್ನೇಹಿತರಿಂದ ದೂರವಿರಿ. ಕಂಬ ಕಂಡ ತಕ್ಷಣ ಕಾಲು ಎತ್ತುವ ಆ ನಾಯಿಗಳ ಬಾಯಿಂದ ಬರುವ ಮಗಳೇ, ತಂಗಿ ಅಕ್ಕಾ ಎನ್ನುವ ಪದಗಳಿಗೆಲ್ಲಾ  ಬೆಲೆ ಕೊಡಬೇಡಿ, ಇವ ನನ್ನ ಅಣ್ಣ ಎಂದು ಪರಿಚಯ ಮಾಡಿಕೊಡುವ ಆ ವ್ಯಕ್ತಿ,  .ಅಸಲಿಗೆ ಆಕೆಯ ಅಣ್ಣನೇ ಆಗಿರುವುದಿಲ್ಲ.  ಗಮನಿಸಿದಂತೆ, ಕಾಮುಕರ ಕಣ್ಣು ಹೆಚ್ಚು ಬೀಳುವುದು ಔಟಿಂಗ್ ಗಾಗಿ ಬಂದ ಜೋಡಿಗಳ ಮೇಲೆ. ಸಾಮಾನ್ಯವಾಗಿ ಇಂತಹ ಜೋಡಿಗಳು ಮನೆಯಲ್ಲಿ ಹೇಳದೆ ಒಬ್ಬರನ್ನೊಬರು ನಂಬಿ ಬಂದಿರುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಈ ವಿಕೃತ ಪ್ರಕರಣಗಳು ನೆಡೆದಾಗ, ದೂರು ದಾಖಲಿಸುವುದಿರಲಿ ಎಲ್ಲಿಯೂ ಹೇಳಿಕೊಳ್ಳಲು ಆಗುವುದಿಲ್ಲ. ಯಾಕಂದ್ರೆ ಮರ್ಯಾದೆ ಪ್ರಶ್ನೆ!!  ಇಂಥಾ ಎಷ್ಟೋ ಕೇಸುಗಳು ಹೀಗೆ ಮುಚ್ಚಿ ಹೋಗುತ್ತವೆ. ನಿಮ್ಮವ ಅದೆಷ್ಟೇ ಬಲಿಷ್ಟನಾದರೂ ಹತ್ತು ಜನರಿಗ ಹೊಡೆಯುವ ಸಿನಿಮಾ ಹೀರೋ ಆಗಲಾರ ಎಂಬುದು ನಿಮಗೆ ನೆನೆಪಿರಲಿ. ಸಿನಿಮಾ ರೀತಿಯಲ್ಲಿ ನಿಮ್ಮನ್ನು ರಕ್ಷಿಸಲು ಯಾವುದೇ ಶಕ್ತಿಮಾನ್ ಆಗಲಿ ಮಿಸ್ಟರ್. ಇಂಡಿಯಾ ಆಗಲಿ ಬರುವುದಿಲ್ಲ ಎಂಬ ಅರಿವು ನಿಮಗಿರಲಿ. ಈ ಆಟೋ ರಿಕ್ಷಾ ಗಳಲ್ಲಿ ಡ್ರೈವಿಂಗ್ ಲೈಸನ್ಸ್‌ ಡಿಸ್ಪ್ಲೇ ಸಿಸ್ಟಂ ರೂಡಿಯಲ್ಲಿದೆ. ಯಾವುದೆ ಆಟೊ ಹತ್ತಿದ ತಕ್ಷಣ ಲೈಸನ್ಸ್‌ ನಲ್ಲಿ ಇರುವ ಮಾಹಿತಿಗಳನ್ನು ನಿಮ್ಮ ಮೊಬೈಲ್ ಫೋನು ಗಳಲ್ಲಿ ದಾಖಲಿಸಿಕೊಳ್ಳಿ. ಲೈನ್ ನಲ್ಲಿ ಯಾರೂ ಇಲ್ಲದ್ದಿದ್ದರೂ ಸುಮ್ಮನೆ ಕಿವಿಗೆ ಮೊಬೈಲ್ ಇಟ್ಟುಕೊಂಡು, ದಾರಿಯುದ್ದಕ್ಕೂ ಯಾರೊಂದಿಗೋ ಎಲ್ಲಾ ರೂಟ್ಗಳನ್ನು ಹೇಳುತ್ತಾ ಮಾತನಾಡುವಂತೆ ನಟಿಸಿ ನಿಮ್ಮ ದೈರ್ಯ ನೋಡಿ ಅವರಲ್ಲಿ ಭಯ ಹುಟ್ಟುವುದು ಖಂಡಿತ. ಸಿನಿಮಾ ಮಂದಿರಗಳಿಗೆ ಹೋದಾಗಾ ಅಲ್ಲಿನ ಶೌಚಾಲಯಗಳನ್ನು ಉಪಯೋಗಿಸಬೇಡಿ, ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಗಿಲು ತೆಗೆಯಬೇಡಿ. ಯಾವುದಾದರು ಸಂದರ್ಶನಕ್ಕೆ ಹೋಗುವಾಗ ಅಥವ ಒಬ್ಬರೇ ಓಡಾಡುವ ಸಂದರ್ಭಗಳಲ್ಲಿ. ಪೆಪ್ಪರ್ ಸ್ಪ್ರೇ ಚಿಲ್ಲಿ ಸ್ಪ್ರೇ ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.  ಇದು ಮೇಲೆರಗಲು ಬಂದ ಕಾಮುಕರ ಜೀವಕ್ಕೆ ಯಾವುದೇ ಹಾನಿ ಮಾಡದೇ ಇದ್ದರೂ ಅವರ ಹಠಾತ್ ದಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಸಿಂಪಡಿಸಿದ ಮರು ಕ್ಷಣವೇ ಅವರಿಗೆ ಅಸಹನೀಯವಾದ ಬರ್ನಿಂಗ್ ಎಪೆಕ್ಟ್ ಕೊಡುತ್ತದೆ. ಆ ಅಂತರದಲ್ಲ್ಲಿ ಹೇಗಾದರೂ ನಾವು ಕಾಮುಕರಿಂದ ಪಾರಾಗಬಹುದು. ಸಾಧಾರಣವಾಗಿ ಎಲ್ಲಾ ಕಡೆಗಳಲ್ಲೂ ಇವು ಲಭ್ಯ. ಸಣ್ಣ ಮಕ್ಕಳ ವಿಷಯಕ್ಕೆ ಬಂದಾಗ, ಅವರ ಮೇಲೆ ಆಗುವ ಇಂಥಾ ಹಲ್ಲೆಗಳಿಗೆ ಸ್ವತ: ಪೋಷಕರು ಹಾಗು ಶಿಕ್ಷಕರೇ ಕಾರಣ ಎಂದು ಹೇಳಬಹುದು. ಒಂದು ಮಗುವಿನ ಮೇಲೆ ಅತ್ಯಾಚಾರವಾಗಿ ಅಷ್ಟು ದಿನವಾದರೂ ಅದು ಪೋಷಕರ ಗಮನಕ್ಕೆ ಬಂದಿಲ್ಲವೆಂದರೆ ಅದು ಅವರಿಬ್ಬರ ನಡುವಿನ ಕಮ್ಯುನಿಕೇಶನ್ ಗ್ಯಾಪ್ ಅಲ್ಲದೆ ಬೇರೇನು? ನಮ್ಮ ಮಗುವಿನಲ್ಲಿ ಆಗುತ್ತಿರುವ ಸಣ್ಣ ಸಣ್ಣ ಬದಲಾವಣೆಗಳನ್ನು ನಾವೆ ಗಮನಿಸ ಬೇಕು. ದೇಹದ ಎಲ್ಲಾ ಅಂಗಗಳನ್ನು  ಸಂಕೋಚವಿಲ್ಲದೆ ಮಕ್ಕಳಿಗೆ ಪರಿಚಯಿಸಬೇಕು, ಗುಪ್ತಾಂಗಗಳಿಗೂ ಮತ್ತು ಇತರ ಅಂಗಗಳಿಗೂ ಇರುವ ವ್ಯತ್ಯಾಸವನ್ನು ತಿಳಿಸಿಕೊಡಬೇಕು. ಕೆನ್ನೆ ಮುಟ್ಟಿ ಮುತ್ತು ಕೊಡುವುದಕ್ಕೂ, ಇತರ ಅಂಗಗಳನ್ನು ಮುಟ್ಟುವುದಕ್ಕೂ ಇರುವ ವ್ಯತಾಸವನ್ನು ಸೂಕ್ಷ್ಮವಾಗಿ ತಿಳಿಸಿಕೊಡಬೇಕು. ಊಟ ಮಾಡದ ಮಗುವನ್ನು ಹೆದರಿಸಲು ಯಾವುದೋ ಕರೀ ನೆರಳನ್ನು ತೋರಿಸಿ, ಅಮ್ಮು...... ಅದು ಗ್ವಾಕ(ದೆವ್ವ) ಕಣಪ್ಪಾ ಊಟಮಾಡಿಲ್ಲ ಅಂದ್ರೆ ನಿನ್ನ ಎತ್ಕೊಂಡ್ ಹೋಗಿ ಬಿಡುತ್ತೆ ಅಂತ ಹೆದರಿಸಿದರೆ, ಆ ಮುಗ್ದ ಮಗು ಹೌದಾ ಅಮ್ಮ ಅಂತ ಹೇಳಿದ ಹಾಗೆ ಕೇಳುತ್ತವೆ. ಮತ್ತೆ ಆ ಕರೀ ನೆರಳು ಕಂಡರೆ ನಿಮಗಿಂತ ಮುಂಚೆಯೇ ಅಮ್ಮ ಗ್ವಾಕ ನೋಡು ಅಲ್ಲಿ ಅಂತ ಗುರುತಿಸಿ ಹೇಳುತ್ತವೆ. ಮಕ್ಕಳಲ್ಲಿರುವ ಇಷ್ಟೇ ಇಷ್ಟು ತಿಳುವಳಿಕೆ ಹಾಗು ಮಕ್ಕಳೊಂದಿಗೆ ನಿಮಗೆ ಇರುವ ಉತ್ತಮ ಕಮ್ಯುನಿಕೇಶನ್ ಸಾಕು. ಶಾಲೆ ಹೋಗುವಷ್ಟು ಮಟ್ಟದ ಪುಟ್ಟ ಮಗುವಿಗೆ ಇದು ಬೆಂಕಿ, ಮುಟ್ಟಿದರೆ  ಸುಡುತ್ತದೆ ಅನ್ನುವಷ್ಟು ಅರಿವಿದ್ದರೆ ಸಾಕು ಈ ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಸಬಹುದು. ಹಾಗೆಯೆ ಎಲ್ಲಾ ಮಕ್ಕಳಲ್ಲೂ ಮಾನವೀಯ ಮೌಲ್ಯಗಳ ಬಗ್ಗೆ ಶಾಲಾಮಟ್ಟದಲ್ಲ್ಲೇ ಅರಿವು ಮೂಡಿಸಬೇಕು. Society Harnessing Equipment(she) ಗಳಂತ ತಾಂತ್ರಿಕ ಸಾಧನ ಗಳು ಮತ್ತಷ್ಟು ಬರಬೇಕು.  ನಿರ್ಬಯ"  ಕೇಸ್ ನಲ್ಲಿ, ಆಕೆ ಪ್ರತಿಭಟಿಸದೆ ಇದ್ದಿದ್ದರೆ ಜೀವ ಉಳಿಯುತ್ತಿತ್ತು, ಅನ್ನುವ ಮಂದಿ ಒಂದು ಕಡೆ, ಜ್ನಾನ  ಭಾರತಿ ಪ್ರಕರಣವಾದಾಗ, ಆ  ಹುಡುಗಿ ಕಾಮುಕರಿಗೆ ಸಹಕರಿಸಿದ್ದಾಳೆ ಅವಳ ಮೈಮೇಲೆ ಯಾವುದೇ ಗಾಯಗಳಿಲ್ಲ ಹಾಗಾಗೆ ಇದು ರೇಪ್ ಅಂತ ಪರಿಗಣಿಸಲಾಗದು ಅಂತ ಪರ ವಾದ ಲಾಯರ್ ಒಂದ್ ಕಡೆ. ತಡ ರಾತ್ರಿಯಲ್ಲಿ ಆ ಹುಡುಗಿಯರು ಬಾಯ್ ಪ್ರೆಂಡ್ಗಳ ಜೊತೆ ಯಾಕೆ ಹೊರಗೆ ಬರ್ಬೇಕಿತ್ತು? ಎಂದೂ ಕೆಲವು ಸಮೂಹಗಳು ಟೀಕಿಸಿದವು , ಆದರೆ ಈಗ ನಡೆದಿರುವ ಪ್ರಕರಣಕ್ಕೆ ಯಾರು ಹೊಣೆ? ೬ ವರ್ಷದ ಕಂದಮ್ಮ ಶಾಲೆಗೆ ಯಾಕೆ ಹೊಯ್ತು ? ಅದೂ ತಪ್ಪು ಅಂತ ಟೀಕಿಸುವ ಬಂಡತನ ದಯವಿಟ್ಟು ಮಾಡ್ಬೇಡಿ. ಆದ ತಪ್ಪಿಗೆಲ್ಲ ಹೆಣ್ಣು ಮಕ್ಕಳನ್ನೇ ಹೊಣೆ ಮಾಡುವ ವ್ಯವಸ್ಥೆ. ಹೋರಾಟ, ಪ್ರತಿಭಟನೆ ಒಂದು ಕಡೆಯಾದರೆ, ನಿಲ್ಲದ ಅತ್ಯಾಚಾರ ಪ್ರಕರಣಗಳು ಇನ್ನೊಂದು ಕಡೆ  ಸದ್ಯದ ಪರಿಸ್ಥಿತಿಯಲ್ಲಿ ನಾವಿರುವುದು, ಇರಬೇಕಾಗಿರುವುದು ಪಾಪಿಗಳ ಲೋಕದಲ್ಲಿ, ಎಲ್ಲಾ ಸರಿಹೋಗುವ ವರೆಗೆ ಆದರೂ ನಾನು ನಮ್ಮ ಸ್ವತಂತ್ರದ ಪರಿಧಿಯನ್ನು ಚಿಕ್ಕದಾಗಿಸಿ ಕೊಳ್ಳುವುದು ಉತ್ತಮ. ಹಾಗೆಂದ ಮಾತ್ರಕ್ಕೆ ಹೆಣ್ಣು ಮಕ್ಕಳು ಹದ್ದು ಮೀರಿ ನಡೆದು ಕೊಳ್ಳುತಿದ್ದಾರೆ ಎಂದು ಅರ್ಥವಲ್ಲ. ಈ ಪಾಪಿಗಳ ಲೋಕದಲ್ಲಿ ಬದುಕಬೇಕಾದರೆ ನಾವು ತೆಗೆದುಕೊಳ್ಳಲೇ ಬೇಕಾದ  ಅಗತ್ಯ ಎಚ್ಚರಿಕೆ ಕ್ರಮಗಳಿವು.
//ನಂದಿನಿ ನಂಜಪ್ಪ//

No comments: