ಬಟ್ಟಲ ಕಂಗಳ
ತೊಟ್ಟಿಲ ಕಂದನ
ತುಟಿಯ ತುಂಟುನಗೆ
ನೀ ತಾನೆ?
ಕಣ್ಣಿನ ಕಣಿವೆಯ
ಕೋಟಿ ಕನಸುಗಳ ಕದ್ದು
ನನಸು ಮಾಡುವ
ನಲ್ಲ ನೀ ತಾನೆ?
ಈ ಮಲ್ಲಿಗೆ ಆಡುವ
ಮಳ್ಳಿ ಮಾತಿಗೆ ತಲೆಯಾಡಿಸಿ
ಮರುಳಾದಂತೆ ನಟಿಸುವ
ಮಳ್ಳ ನೀ ತಾನೆ?
ರಂಗೋಲಿ ಬಿಡಿಸುವ
ಬೆರಳಿನ ಚಂದಕೆ
ಕಾಲುಂಗುರ ತಂದವ
ನೀ ತಾನೆ?
ಬಳ್ಳಿ ನಡುವಿನ
ನರ್ತನಕೆ ಮಣಿದು
ಬೆಳ್ಳಿ ಡಾಬಾದವ
ನೀ ತಾನೆ ?
ಹನುಮನ ಬಾಲದ
ದಿನಸಿಯ ಪಟ್ಟಿಗೆ
ಕಿವಿ ಕೊಡದ
ಜಾಣ ಕಿವುಡ
ನೀ ತಾನೆ?
ಮುಚ್ಚಿದ ಕಿವಿಯ
ನಾ ಕೋಪದೆ ಹಿಂಡಲು
ಹೊಡೆಯಲು ಬಂದವ
ನೀ ತಾನೆ?
ಕಟುಕನ ಕತ್ತಿಯೇ
ಜಾರುವ ಪರಿಯಲಿ
ಒಲವನು ಕೊಡುವವಳು
ನಾ ತಾನೆ?
ನೀ ಕಟ್ಟಿದ ತಾಳಿಗೆ
ತಾಳಿ ಬಾಳಿದ
ನಿನ್ನ ತವರಿನ ತಾಯಿ
ನಾ ತಾನೆ?
ಬಾಳ ಎಲೆಯಲಿ
ತನು ಮನವ
ಉಡಬಡಿಸಿ
ಬದುಕ ಹಂಚಿ
ಕೊಂಡವಳು
ನಾ ತಾನೆ?
ಇಂಟೆ ಅನ್ನಕ್ಕೊಂದು
ಮೊಗೆ ನೀರು ಕುಡಿಯುತ
ಬಾಳ್ವೆ ನಡೆಸಿದ
ನಿನ ಬಾಳ ಸಾರಥಿ
ನಾ ತಾನೆ?
ಹೆತ್ತವರೇ ಅರಿಯದ
ನಿನ ಮಗುಮನಸ
ಅರಿತಿರುವ
ನಿನ್ನಿಂದ ಹಡೆದವಳು
ನಾ ತಾನೆ?
//ನಂದಿನಿ//
No comments:
Post a Comment