ಅಮ್ಮ
ಅಮ್ಮನ ಅಕ್ಕರೆಯಾಳ
ಅರಿವಾಯಿತು ಅಂದು
ಅವಳ ಒಡಲಾಳದಲಿ
ಅಂಕುರವೊಡೆದು ಇಳೆಗೆ ಇಳಿದಂದು
ಆಕಾಂಕ್ಷೆಯ ಕಂಗಳಲ್ಲಿ
ಆನಂದ ಕಣ್ಣೀರು ನನ್ನಳುವ ಆಕ್ರಂದನವನಾಲಿಸಿ
ಇಂಗಿಸಿದಳೆನ್ನ ಹಸಿವ ಕರುಣಾಮಯಿ, ಅವಳೆದೆಯ ಅಮೃತವನುಣಿಸಿ
ಈಶ್ವರನಲ್ಲಿ ಅಂದೇ ಮೊರೆ
ಇಟ್ಟೆ ಈರೇಳು ಜನ್ಮಕ್ಕೂ ನಿನ್ನ ಪ್ರೀತಿಯ ಬಯಸಿ
ಉಸಿರ ಉದಯವನಿತ್ತ ಉಷೆಗೆ
ನಮಸ್ಕರಿಸಿ
ಊರೂರೇ ಊಳಿಡಲು
ಹೆಣ್ಣುಮಗುವೆಂದು ನನ್ನ ತಿರಸ್ಕರಸಿ
ಋಷಿಯಂತೆ
ಸತ್ಕರಿಸಿದಳೆನ್ನ ಸಂತಸದಿ ಸಂತೈಸಿ
ಎದೆಯ
ಏರಿಳಿತವಿದು ಉಲಿಯುತಿದೆ ಪದವೊಂದೆ ಅಮ್ಮ ಅಮ್ಮ
ಏನ ಹೇಳಲಿ ನಾ
ಮಮತೆ ಮಾತೆಯ ಒಲುಮೆ ಐಸಿರಿಗೆ
ಐಕ್ಯವಾಯಿತು
ಹೃದಯ ಅವಳಲ್ಲಿ ಅವಳ ವಾತ್ಸಲ್ಯದ ಪರಿಗೆ
ಒಂದು ಜನ್ಮ ಸಾಲದು
ನಿನ್ನ ಪ್ರೀತಿಯಾಳದ ಬಣ್ಣನೆಗೆ
ಓಡಿ ಬಂದು ಮಡಿಲು
ಸೇರುವೆ ನಿನ್ನ ಕರುಳಿನ ಕರೆಗೆ
ಔದಾರ್ಯದಿ ಒಲವ
ಔಷಧವನಿತ್ತಳು ನನ್ನ ನೋವಿಗೆ
ಅಂಬರಕ್ಕೂ ಎತ್ತರ
ಸಾಗರಕ್ಕೂ ಬಿತ್ತರ ಅವಳ ಅಕ್ಕರೆಯ ಅಕ್ಷಯ
ಅಃ ಅಃ ಕನ್ನಡ
ಸ್ವರಗಳು ಮುಗಿದು ಹೋದವು
ಸಾಲುಸಾಲುಗಳು ಸಾಲದಾದವು
ಜೀವಮೃತವನಿತ್ತ
ದೇವತೆಯ ಕೊಂಡಾಡಲು
No comments:
Post a Comment